ಮಾರ್ಜಕಗಳು-
ಮುಖ್ಯವಾಗಿ ಮೇಲ್ಮೈ ತುಯ್ತ ತಗ್ಗಿಸಿ, ಕೊಳೆಯನ್ನು ತೆಗೆದು ಚೊಕ್ಕಗೊಳಿಸುವ ವಸ್ತುಗಳು (ಡಿಟರ್ಜೆಂಟ್ಸ್), ಸ್ಯಾಪೊನಿನ್‍ಗಳು, ಗೂಳಿ ಪಿತ್ತ, ಚೌಳುಮಣ್ಣು ನೈಸರ್ಗಿಕ ಮಾರ್ಜಕಗಳು, ಸಾಬೂನು ಕೂಡ ಮೂಲತಃ ಮಾರ್ಜಕವೇ ಆದರೂ ಈಚೆಗಿನ ವರ್ಷಗಳಲ್ಲಿ ಸಾಬೂನಲ್ಲದೆ ಸಂಶ್ಲೇಷಕ ಪದಾರ್ಥಗಳನ್ನು ಮಾರ್ಜಕಗಳೆಂದು ನಿರ್ದೆಶಿಸುವುದು ರೂಢಿ. ಗಿರಣಿಯಲ್ಲಿ ಬಟ್ಟೆಯನ್ನು ಅಥವಾ ಕಚ್ಚಾ ಕಾಗದವನ್ನು ಚೊಕ್ಕಗೊಳಿಸುವ ಮಾರ್ಜಕಗಳು ಮೊದಲು 1925 ರಲ್ಲಿ ತಯಾರಾಗಿ ಬಟ್ಟೆ ನೇಯ್ಗೆ ಕೈಗಾರಿಕೆಯಲ್ಲಿ ಬಳಕೆಗೆ ಬಂದುವು. ಇದಕ್ಕೆ ಮೊದಲು ಕೊಳೆ ತೆಗೆಯಲು ಎಲ್ಲೆಲ್ಲೂ ಸಾಬೂನುಗಳೇ ಬಳಕೆಯಲ್ಲಿದ್ದುವು. ಅದರೆ ಇಲ್ಲೊಂದು ತೊಂದರೆ ಇತ್ತು. ನೂಲನ್ನು ತೊಳೆವಾಗ ನೀರು ಅಂಟದ ಸುಣ್ಣದ ಸಾಬೂನು ನೂಲಿಗೆ ಕಚ್ಚಿಕೊಳ್ಳುತ್ತಿತ್ತು. ಮುಂದೆ ವಸ್ತ್ರವನ್ನು ಬಣ್ಣದ ನೀರಿನಲ್ಲಿ ಅದ್ದಿದಾಗ ಸಾಬೂನು ಅಂಟಿದ್ದ ಕಡೆಗಳಲೆಲ್ಲ ಬಣ್ಣ ಅಂಟದೆ ಬೆಳ್ಳಗೆ ಉಳಿಯುತ್ತಿತ್ತು. ಹೀಗೆ ಬಣ್ಣ ಹತ್ತದೆ ಕೆಟ್ಟಾಗ ಸರಿಪಡಿಸುವುದು ದುಬಾರಿ ಖರ್ಚಿನದು, ಶ್ರಮಸಾಧ್ಯ. ಅದ್ದರಿಂದ ನೂಲಿನ ಸಂಸ್ಕರಣದಲ್ಲಿ ಬಣ್ಣ ಹತ್ತುವಂತೆ ಮಾಡುವ ವಿಧಾನಗಳ ಶೋಧನೆ ನಡೆದು ಕೊನೆಗೆ 1925 ರಲ್ಲಿ ಫಲಿಸಿತು.

ಮೊದಲು ನೀರನ್ನು ದೂರಮಾಡುವ ಮೇಲ್ಮೈ ಮೇಲೆ ಮಾರ್ಜಕಗಳು ಹೀರಲ್ಪಟ್ಟು ತೇವ ಮಾಡಿ ನೀರಿನೊಂದಿಗೂ ಅದರಲ್ಲಿ ವಿಲೀನವಾಗುವ ಪದಾರ್ಥಗಳೊಂದಿಗೂ ನಿಕಟ ಸಂಪರ್ಕ ಪಡೆವುವು. ಆಗ ನೀರಿನ ದ್ರಾವಣಗಳ ಮೇಲ್ಮೈ ತುಯ್ತು ತಗ್ಗಿ ಜಾಳು ಜಾಳಾಗಿರುವ ವಸ್ತುಗಳೊಳಗೆ ಮರ್ಜಕಗಳು ನುಗ್ಗಲು ಅವಕಾಶವಾಗುತ್ತದೆ. ಅಲ್ಲಿ ರಾಸಾಯನಿಕಕ್ರಿಯೆ ನಡೆದು ವಸ್ತು ಶುಭ್ರವಾಗುತ್ತದೆ.

ಮಾರ್ಜಕಗಳ ಕ್ರಿಯೆ ತೊಡಕಿನದೆನಿಸಿದರೂ ಶುಭ್ರಗೊಳಿಸಬೇಕಾದ ವಸ್ತುವಿಗೂ ನೀರಿಗೂ ನಡುವಣ ಪದರದಲ್ಲಿ ಮೇಲ್ಮೈ ತುಯ್ತವನ್ನು ಇಳಿಸುವುದೇ ಇವುಗಳ ಮುಖ್ಯ ಕೆಲಸ. ನೀರು ಅಂಟದ ಗುಂಪುಗಳು ಈ ನಡುಪದರದ ಮೇಲಿರುತ್ತವೆ. ಇವು ಆಮೇಲೆ ಕೊಳಕನ್ನು ವಿಲೀನಿಸಿ ತಮ್ಮಲ್ಲಿ ಇಟ್ಟುಕೊಂಡು ಕೊಳಕಾಗಿರುವ ವಸ್ತುವಿನ ಮೇಲ್ಮೈ ಪೂರ್ತಿಯಾಗಿ ತೇವಗೂಡುವಂತೆ ಮಾಡುತ್ತವೆ. ಈ ಮಧ್ಯವರ್ತಿ ಕೊಳಕಿನ ಆಸರೆಯಾದ ನೀರು ಅಂಟದ ಗುಂಪುಗಳ ನಿವಾರಣೆಯೇ ಮಾರ್ಜಕಗಳು ಎಸಗುವ ಕ್ರಿಯೆ.

ಮಾರ್ಜಕಗಳ ಪೈಕಿ ಸಾಬೂನು ಎಲ್ಲರಿಗೂ ಚೆನ್ನಾಗಿ ಗೊತ್ತಿರುವ ಹಳೆಯ ವಸ್ತು. ಉಪ್ಪುನೀರೊಂದರ ಹೊರತು ಮಿಕ್ಕ ಎಲ್ಲ ಬಗೆಯ ನೀರುಗಳಲ್ಲೂ ಇದು ಕೊಳೆ ನಿರ್ಮೂಲನ ಮಾಡುತ್ತದೆ. ಈಗಿನ ಮಾರ್ಜಕಗಳು ಅಂಥ ನೀರಲ್ಲೂ ಕೆಲಸಮಾಡಬಲ್ಲವು. ಅದರೆ ಮಾರ್ಜಕದೊಂದಿಗೆ ಸಾಬೂನನ್ನು ಎಂದಿಗೂ ಬಳಸಬಾರದು. ಹಾಗೆ ಮಾಡಿದರೆ ಎರಡೂ ನಿರುಪಯುಕ್ತವಾಗುವುವು.
	(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ